ಶಿವಮೊಗ್ಗ: ದೇಶ ಹಾಗೂ ಸಮಾಜದ ಏಳಿಗೆಗಾಗಿ ವಿಪ್ರರು ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದು ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ| ಬಿ.ಎನ್.ವಿ. ಸುಬ್ರಹ್ಮಣ್ಯ ಹೇಳಿದರು. ಇಲ್ಲಿನ ಶಾಂತಲಾ ಸ್ಪೆರೋಕ್ಯಾಸ್ಟ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭ ಮತ್ತು ವಿಪ್ರವಿವಾಹ ಶಿವಮೊಗ್ಗ ಅಂತರ್ಜಾಲ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಬ್ರಾಹ್ಮಣ ಸಮಾಜದವರು ಒಟ್ಟು 22 ಜನ ಸ್ಪರ್ಧಿಸಿದ್ದರೂ ಅವರಲ್ಲಿ ಕೇವಲ 10 ಜನ ಸಮಾಜ ಭಾಂದವರು ಗೆಲುವು ಸಾಧಿಸಲು ಸಾಧ್ಯವಾಗಿದೆ. ಇಂದಿನ ಸ್ಥಿತಿಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳು ಚುನಾವಣೆಯಲ್ಲಿ ಕೇವಲ ಬ್ರಾಹ್ಮಣರ ಮತಗಳಿಂದ ಗೆಲುವು ಪಡೆಯಲು ಸಾಧ್ಯವಿಲ್ಲ ಎಂದ ಅವರು, ಸಂಘಟನೆ ಇದ್ದರೆ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯವಿದೆ. ಹೀಗಾಗಿ ಸಮಾಜ ಬಾಂಧವರು ಸಂಘಟನೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಅಧಿಕಾರ ಶಾಶ್ವತವಲ್ಲ. ದೊರಕಿದ ಅಧಿಕಾರವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಬೇಕು. ಜನಸಾಮಾನ್ಯರ ಕಷ್ಟಕ್ಕೆ ನೆರವಾಗಬೇಕೆಂದು ನೂತನ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ರವರಿಗೆ ಸಲಹೆ ನೀಡಿದರು. ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆ. ದಿವಾಕರ್ ಮಾತನಾಡಿ, ಸಮಾಜ ಬಾಂಧವರು ಪ್ರಾಮಾಣಿಕತೆಯಿಂದ ಚುನಾವಣೆಯಲ್ಲಿ ಕೆಲಸ ಮಾಡಿದ್ದರೆ ಕೆ.ಬಿ. ಪ್ರಸನ್ನಕುಮಾರ್ 12 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು. ಆದರೆ ಸಮಾಜದ ಮುಖಂಡರು ಸಹಕರಿಸಲಿಲ್ಲ. ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ ಅದು ಸಾಮಾನ್ಯ ಬ್ರಾಹ್ಮಣರು ನೀಡಿದ ಸಹಕಾರದಿಂದ ಎಂದು ಅಭಿಪ್ರಾಯಪಟ್ಟರು.
ಹಿಂದೆ ಬಿ.ವಿ. ರಾಮಸ್ವಾಮಿರವರು ಸಮಾಜಕ್ಕೆ ನಾಯಕತ್ವ ತುಂಬುವ ಕೆಲಸ ಮಾಡಿದರು. ಅವರ ನಿಧನದ ನಂತರ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಾಗೂ ನಾಯಕತ್ವ ಕೊಡುವ ಐತಿಹಾಸಿಕ ಹೊಣೆಗಾರಿಕೆ ಶಾಸಕ ಪ್ರಸನ್ನಕುಮಾರ್ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ನಾಗರಿಕ ಹಿತರಕ್ಷಣ ಸಮಿತಿಯ ಕೆ.ವಿ. ವಸಂತಕುಮಾರ್ ಮಾತನಾಡಿ, 2018ರ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ವಿರೋಧಿಗಳು ಠೇವಣಿ ಕಳೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಾಮಾಣಿಕ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ತಾವು ಮಾಡುವ ತಪ್ಪುಗಳನ್ನು ತಿಳಿಸಿ ಹೇಳುತ್ತದೆ. ಏಕೆಂದರೆ ದುರಾಸೆ-ಸ್ವಾರ್ಥದಿಂದ ಆಸ್ತಿ ಮಾಡುತ್ತೇವೆ ಎಂಬ ಹುಚ್ಚು ಆಸೆಗೆ ಬಿದ್ದು ಹೇಗೆ ಅಧಿಕಾರ ಕಳೆದುಕೊಂಡಿದ್ದಾರೆ ಎಂಬುದಕ್ಕೆ ನಮ್ಮ ಮುಂದೆಯೇ ಉದಾಹರಣೆ ಇದೆ ಎಂದು ಪ್ರಸನ್ನ ಕುಮಾರ್‌ರಿಗೆ ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರದ ಅಭಿವೃದ್ಧಿಗೆ ಹಾಗೂ ಶ್ರೇಯಸ್ಸಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಮಾಜದ ಗೌರವವನ್ನು ಎತ್ತಿಹಿಡಿಯುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿಪ್ರವಿವಾಹ ಶಿವಮೊಗ್ಗ ಅಂತರ್ಜಾಲ ಲೋಕಾರ್ಪಣೆಗೊಳಿಸಿದ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ| ಬಿ. ವೆಂಕಟರಾವ್ ಮಾತನಾಡಿದರು.
ಜಿಲ್ಲಾ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹಾಗೂ ನಗರಸಭೆ ಸದಸ್ಯೆ ಸುರೇಖಾ ಮುರುಳೀಧರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎಲ್.ಟಿ. ಹೆಗಡೆ, ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಗುಡ್ಡೆಕೊಪ್ಪ ನಾರಾಯಣರಾವ್ ಮತ್ತಿತರರು ಇದ್ದರು.