ಕಾಂಗ್ರೆಸ್ಗೆ ಉತ್ತಮ ಪ್ರತಿಕ್ರಿಯೆ: ಪ್ರಸನ್ನ ಕುಮಾರ್
First Published: 01 May 2013 12:50:06 PM IST
ಶಿವಮೊಗ್ಗ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ದುರಾಡಳಿತ ಹಾಗೂ ಇಲ್ಲಿನ ಬಿಜೆಪಿ ಅಭ್ಯರ್ಥಿಯ ವ್ಯಾಪಕ ಭ್ರಷ್ಟಾಚಾರ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಅದೇ ರೀತಿ ಕಾಂಗ್ರೆಸ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಅಲೆ ಇದ್ದು, ಶಿವಮೊಗ್ಗ ಕ್ಷೇತ್ರದಲ್ಲೂ ಮತದಾರರು ಕಾಂಗ್ರೆಸ್ ಬೆಂಬಲಿಸಿ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು.
ಕೆಜೆಪಿ ತಿರಸ್ಕಾರ: ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಭ್ರಷ್ಟಾಚಾರದಲ್ಲೇ ಮುಳುಗಿದ್ದ ಬಿಜೆಪಿ ಬಗ್ಗೆ ಜನರಲ್ಲಿ ಆಕ್ರೋಶ ಇದೆ. ಇದೂ ಸಹ ಕಾಂಗ್ರೆಸ್ಗೆ ಅನುಕೂಲಕರವಾಗಲಿದೆ ಎಂದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬಿಜೆಪಿಯೇ ನೇರ ಸ್ಪರ್ಧಿ. ಇನ್ನೊಂದೆಡೆ ಬಿಜೆಪಿಯೊಂದಿಗೆ ಕೆಜೆಪಿಯನ್ನೂ ಜನ ತಿರಸ್ಕರಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮತದಾರರಿಗೆ ಹಣದ ಆಮಿಷಒಡ್ಡಿ ಮತ ಪಡೆಯುವ ಸಂಚು ಬಿಜೆಪಿಯಿಂದ ನಡೆಯುತ್ತಿದೆ. ಚುನಾವಣೆಯ ಕೊನೆ 3 ದಿನಗಳಲ್ಲಿ
ಉಪಮುಖ್ಯಮಂತ್ರಿ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಕೋಟಿ ಕೋಟಿ ಹಣ ಖರ್ಚು ಮಾಡುವ ಬಗ್ಗೆ ಮಾಹಿತಿ ಇದ್ದು, ಕೂಡಲೇ ಚುನಾವಣಾಧಿಕಾರಿಗಳು ಈ ಕೋಟೆಗೆ ಬೀಗ ಜಡಿಯಬೇಕು ಎಂಬುದು ನಮ್ಮ ಆಗ್ರಹ ಎಂದರು.
ಕ್ರಮಕ್ಕೆ ಆಗ್ರಹ: ಮುಂದಿನ 2-3 ದಿನಗಳಲ್ಲಿ 20-30 ಕೋಟಿ ರುಪಾಯಿ ಹಣ ಖರ್ಚು ಮಾಡುವ ಕೆಲ ಮೂಲಗಳಿಂದ ಮಾಹಿತಿ ಬಂದಿದೆ. ಹೀಗಾಗಿ ನ್ಯಾಯ ಸಮ್ಮತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನಗರದ ತುಂಗಾ ಕಾಲುವೆ ಏರಿ ಮೇಲೆ ವಾಸವಿರುವವರಿಗೆ ಹಕ್ಕುಪತ್ರ ನೀಡಲಾಗುವುದು ಮತ್ತು ಯುವಕ-ಯವತಿಯರು ಉದ್ಯೋಗಕ್ಕಾಗಿ ದೂರದೂರುಗಳಿಗೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿಸುವ ಯೋಜನೆ ಜಾರಿಗೆ ತರುವುದಾಗಿ ಹೇಳಿದರು.
ಕೆಲವು ಕಾಂಗ್ರೆಸ್ ಮುಖಂಡರು ಮತ್ತು ಕೆಲವು ನಗರಸಭಾ ಸದಸ್ಯರು, ಪದಾಧಿಕಾರಿಗಳು ಪಕ್ಷದ ಪ್ರಚಾರ ಪ್ರಚಾರಕೈಗೊಳ್ಳುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಸನ್ನಕುಮಾರ್, ಆ ರೀತಿಯ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಕೋಮುವಾದಿಗಳನ್ನು ಸೋಲಿಸಿ: ಕಾಂಗ್ರೆಸ್ ಮುಖಂಡ ಹಾಗೂ ಚುನಾವಣಾ ವೀಕ್ಷಕ ಜಿತೇಂದ್ರ ದೇಶಪ್ರಭು ಮಾತನಾಡಿ, ಬಿಜೆಪಿ ಜನರ ಬೆಂಬಲ ಮತ್ತು ನಂಬಿಕೆ ಕಳೆದುಕೊಂಡಿದೆ. ಅದು ಇನ್ನೆಂದೂ ರಾಜ್ಯದಲ್ಲಿ ಅಧಿಕಾರ ನಡೆಸುವುದಿಲ್ಲ ಎಂದು ಭವಿಷ್ಯ ನುಡಿದರು. ಕೋಮುವಾದಿಗಳನ್ನು ಸೋಲಿಸುವುದೆ ಕಾಂಗ್ರೆಸ್ ಮುಂದಿರುವ ಗುರಿ ಎಂದು ತಿಳಿಸಿದರು.
ನಗರದಲ್ಲಿ ರಾಹುಲ್ಗಾಂಧಿ ಕಾರ್ಯಕ್ರಮ ರದ್ದಾಗಿದ್ದರೂ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆ ಇದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪಕ್ಷದ ಪರ ಪ್ರಚಾರ ನಡೆಸಲು ಬುಧವಾರ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಪಕ್ಷದ ವಕ್ತಾರ ಕೆ.ದಿವಾಕರ್, ಮುಖಂಡ ಎಸ್.ಪಿ.ದಿನೇಶ್, ಸುಂದರೇಶ್, ಪಿ.ವಿಶ್ವನಾಥ್ ಮತ್ತಿತರರಿದ್ದರು.
No comments:
Post a Comment