ವಿ.ಸಿ.ಪ್ರಸನ್ನ
ಶಿವಮೊಗ್ಗ: ಸಂಪತ್ತಿಗೆ ಸವಾಲು ಎಂಬ ಘೋಷಣೆಯೊಂದಿಗೆ ಚುನಾವಣೆಗೆ ಇಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನ ಕುಮಾರ್ ಅಲ್ಪಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಸಂಭ್ರಮಿಸಿದರು.
ಎಲೆಕ್ಟ್ರಾನಿಕ್ ಮತ ಯಂತ್ರದ ಎಣಿಕೆ ಮುಗಿದರೂ ಅಂಚೆ ಮತಗಳ ಎಣಿಕೆ ಸುಮಾರು ಮೂರುವರೆ ತಾಸು ನಡೆದು ಫಲಿತಾಂಶ ಪ್ರಕಟಗೊಂಡಿತು. ನಂತರ ಪಕ್ಷ ಹಾಗೂ ಅಭ್ಯರ್ಥಿಗೆ ಜೈಕಾರ ಹಾಕುತ್ತಾ ಮತ ಎಣಿಕೆ ಕೇಂದ್ರದಿಂದ ನೂತನ ಶಾಸಕ ಪ್ರಸನ್ನಕುಮಾರ್ ಜತೆಗೆ ಹೊರ ಬಂದ ಕಾರ್ಯಕರ್ತರನ್ನು ಮಹಾವೀರ ವೃತ್ತದ ಬಳಿ ಅಪಾರ ಸಂಖ್ಯೆಯಲ್ಲಿ ಸೇರಿದ್ದವರು ಬರ ಮಾಡಿಕೊಂಡರು.
ಶಾಸಕರಿಗೆ ಹಾರ, ತುರಾಯಿ ಹಾಕಿ ಪಕ್ಷದ ಬಾವುಟ ಹಿಡಿದು, ಜೈಕಾರ ಕೂಗಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಪರಸ್ಪರ ಅಭಿನಂದಿಸಿಕೊಂಡರು. ನೂರಾರು ಬೈಕ್‌ಗಳಲ್ಲಿ ಆಗಮಿಸಿದ್ದ ಕಾರ್ಯಕರ್ತರು ತೆರೆದ ಜೀಪ್‌ನಲ್ಲಿ ಪ್ರಸನ್ನ ಕುಮಾರ್‌ರನ್ನು ಕರೆದುಕೊಂಡು ಬಾಲರಾಜ್ ಅರಸ್ ರಸ್ತೆ ಮೂಲಕ ಗೋಪಿ ವೃತ್ತಕ್ಕೆ ತೆರಳಿದರು. ಇದಕ್ಕೂ ಮೊದಲು ಮಹಾವೃತ್ತದಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದರು.
ಪ್ರಮುಖರ ಅನುಪಸ್ಥಿತಿ: ಶಿವಮೊಗ್ಗ ಕ್ಷೇತ್ರದ ಮತ ಎಣಿಕೆ ಬೆಳಗ್ಗೆ 8ಕ್ಕೆ ಆರಂಭಗೊಂಡು ಮಧ್ಯಾಹ್ನ 4.30ರ ಸುಮಾರಿಗೆ ಮುಗಿದು ಫಲಿತಾಂಶ ಹೊರಬಿತ್ತು. ಇಷ್ಟಾದರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಸೇರಿದಂತೆ ಯಾವೊಬ್ಬ ಪ್ರಮುಖ ಕಾಂಗ್ರೆಸ್ ನಾಯಕರೂ ಮತ ಎಣಿಕೆ ಕೇಂದ್ರದತ್ತ ಮುಖ
ಹಾಕಲಿಲ್ಲ. ಮೊದಲಿನಿಂದಲೂ ಪ್ರಸನ್ನಕುಮಾರ್ ಪರ ಚುನಾವಣೆ ಪ್ರಚಾರಕ್ಕೆ ಹಿಂದೇಟು ಹಾಕಿದ್ದ ಅನೇಕರಿಗೆ ಫಲಿತಾಂಶ ಅಪಥ್ಯವಾಗಿತ್ತು. ಹೀಗಾಗಿ ಬಹಳಷ್ಟು ಜನ ಪ್ರಮುಖರು ಮೆರವಣಿಗೆ ಸಂದರ್ಭದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರು ಹಾಗೂ ಪ್ರಸನ್ನ ಕುಮಾರ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಜಯಯಾತ್ರೆ ನಡೆಸಿ ಸಂತಸಪಟ್ಟರು.
ಇದೇ ರೀತಿ ನವುಲೆ ಸೇರಿದಂತೆ ನಗರದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಸ್ಥಳೀಯ ವಾಗಿಯೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮುಖಕ್ಕೆ ಬಣ್ಣ ಹಚ್ಚಿಕೊಂಡು ಕಾಂಗ್ರೆಸ್ ಬಾವುಟ ಹಿಡಿದು ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ನಗರಾದ್ಯಂತ ಸಂಚರಿಸಿ ಗೆಲುವಿನ ಸಂಭ್ರಮ ಆಚರಿಸಿದರು.
No comments:
Post a Comment