Saturday, 11 May 2013

From Kannada Prabha May 9th


ಪೇಪರ್ ಹಾಕುತ್ತಿದ್ದ ಹುಡುಗ ಈಶ್ವರಪ್ಪರನ್ನೇ ಸೋಲಿಸಿದ!

ಕ.ಪ್ರ.ವಾರ್ತೆ  ಶಿವಮೊಗ್ಗ  ಮೇ 9-
ಒಂದು ಕಾಲದಲ್ಲಿ ಮನೆ ಮನೆಗೆ ಪೇಪರ್ ಹಾಕುತ್ತಿದ್ದ ಹುಡುಗ ಇವತ್ತು ಅದೇ ಪೇಪರ್‌ಗಳಲ್ಲಿ 'ರಾಜ್ಯದ ಉಪಮುಖ್ಯಮಂತ್ರಿ'ಯನ್ನೇ ಸೋಲಿಸಿದ ಸುದ್ದಿಯಾಗಿದ್ದಾನೆ!
ಆ ಹುಡುಗ ಮತ್ಯಾರೂ ಅಲ್ಲ ಶಿವಮೊಗ್ಗ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಕೆ.ಎಸ್. ಈಶ್ವರಪ್ಪ ಅವರನ್ನು ಈ ಬಾರಿಯ ಚುನಾವಣಾ ಕಣದಲ್ಲಿ ಮಣಿಸಿದ ಕಾಂಗ್ರೆಸ್ ಹುರಿಯಾಳು ಕೆ.ಬಿ. ಪ್ರಸನ್ನಕುಮಾರ್. ಯಾವುದೇ ರಾಜಕಾರಣದ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದ ಕೆ.ಬಿ. ಪ್ರಸನ್ನಕುಮಾರ್ ಈಗ ತಮ್ಮತ್ತ ಎಲ್ಲರ ಕಣ್ಣು ತಿರುಗುವಂತೆ ಮಾಡಿದ್ದಾರೆ. ಕೆ.ಎಸ್. ಈಶ್ವರಪ್ಪ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಶಾಲಾ ದಿನಗಳಲ್ಲಿಯೇ ಇವರ ಸ್ವಾವಲಂಬಿ ಬದುಕು ಶುರುವಾಗಿತ್ತು. ಚಿಕ್ಕವರಾಗಿದ್ದಾಗಲೇ ಇವರು ತಮ್ಮ ಓದಿಗಾಗಿ ಯಾರನ್ನೂ ಅವಲಂಬಿಸದೆ ಮನೆ ಮನೆಗೆ ಪೇಪರ್ ಹಾಕುವ ಕೆಲಸ ಶುರು ಮಾಡಿಕೊಂಡರು. ಕಾಂಗ್ರೆಸ್ ಟಿಕೆಟ್ ದೊರೆತು ಅವರು ಗಾಂಧಿನಗರ ಬಡಾವಣೆಯಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಕೆಲವು ಮತದಾರರು ಇವರನ್ನು ಮನೆಯೊಳಗೆ ಕರೆದು, ದಶಕಗಳ ಹಿಂದೆ ತಮ್ಮ ಮನೆಗೆ ಪೇಪರ್ ಹಾಕುತ್ತಿದ್ದುದನ್ನು ನೆನಪಿಸಿಕೊಂಡು, ಚುನಾವಣೆಗೆ ಬಳಸಿಕೊಳ್ಳುವಂತೆ ಐನೂರು- ಸಾವಿರ ರುಪಾಯಿ ನೀಡಿದ್ದಕ್ಕೆ ಹಲವರು ಸಾಕ್ಷಿಯಾಗಿದ್ದಾರೆ.
ಎಟಿಎನ್‌ಸಿಸಿ ಕಾಲೇಜಿಗೆ ಸೇರಿದರಾದರೂ ಪ್ರಸನ್ನಕುಮಾರ್ ಅವರಿಗೆ ಬಿಕಾಂ ಪದವಿ ಪೂರ್ಣಗೊಳಿಸಲು ಆಗಲಿಲ್ಲ. ಇವರು ಕಾಲೇಜು ಓದುತ್ತಿರುವಾಗಲೇ ತಂದೆ ನಿಧನರಾಗಿದ್ದರಿಂದ ಮನೆಯ ಸಂಪೂರ್ಣ ಜವಾಬ್ದಾರಿ ಇವರ ಮೇಲೆ ಬಿದ್ದಿತ್ತು. ಗಾಂಧಿ ಬಜಾರ್‌ನ ಶ್ರೀನಿವಾಸ ಸ್ಟೋರ್‌ನಲ್ಲಿಯೂ ಕೆಲವು ವರ್ಷ ಕೆಲಸ ಮಾಡಿದರು. ನಂತರ ಸ್ವಂತ ಎಸ್‌ಟಿಡಿ ಬೂತ್, ಫ್ಯಾನ್ಸಿ ಸ್ಟೋರ್ ನಡೆಸಿದರು. ಜೀವನೋಪಾಯಕ್ಕಾಗಿ ಗುತ್ತಿಗೆದಾರರಾಗಿ ಬದಲಾದರು. 4ನೇ ದರ್ಜೆ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಸ್ಥಾನದಿಂದ ಮೊದಲನೇ ದರ್ಜೆ ಕಾಂಟ್ರ್ಯಾಕ್ಟರ್ ಆದರು. ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರೂ ಆದರು.
ರಾಜಕೀಯ ಪ್ರವೇಶ: ಬಂಗಾರಪ್ಪ ಅವರ ಮಾರ್ಗದರ್ಶನಲ್ಲಿ ಪ್ರಸನ್ನಕುಮಾರ್ 1992ರಲ್ಲಿ ಕಾಂಗ್ರೆಸ್ ಪ್ರವೇಶಿಸಿದರು. ಮೊದಲು ಯುವ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿ ಹಂತಹಂತವಾಗಿ ಬೆಳೆಯುತ್ತಾ ಬಂದ ಇವರನ್ನು ಗುರುತಿಸಿ ಕಾಂಗ್ರೆಸ್ 2006ರ ನಗರಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರಸಭೆಯ ಅಶೋಕ ನಗರ ವಾರ್ಡ್‌ನಿಂದ ಸ್ಪರ್ಧಿಸಲು ಅವಕಾಶ ನೀಡಿತು. ಈ ಅವಧಿಯಲ್ಲಿ ಅವರು ಮಾಡಿದ ಜನಪರ ಕೆಲಸಗಳು ಅವರ ಕೈಹಿಡಿದವು. ತಮ್ಮ ವಾರ್ಡ್ ಕೆಲಸ ಮಾತ್ರವಲ್ಲದೇ ಶಿವಮೊಗ್ಗ ನಗರದ ಯಾವುದೇ ವಾರ್ಡ್‌ನ ಸಮಸ್ಯೆಯನ್ನು ಅವರ ಬಳಿ ತಂದರೂ ಅವರು ಬಗೆಹರಿಸಿಕೊಡುತ್ತಿದ್ದರು. ಶಿವಮೊಗ್ಗ ನಗರದ ಜನರ ಸಂಪರ್ಕವನ್ನು ಈ ರೀತಿ ಬೆಳೆಸಿಕೊಳ್ಳುತ್ತಾ ಹೋದರು. ಮೀಸಲಾತಿ ಬದಲಾಗದ 2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಇವರು ಮತ್ತೆ ಅಶೋಕ ನಗರ ವಾರ್ಡ್‌ನಿಂದಲೇ ಕಣಕ್ಕಿಳಿದರು. ಅಷ್ಟರಲ್ಲಾಗಲೇ ಅವರು ವಿಧಾನಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿದ್ದರಿಂದ ಅವರನ್ನು ಸೋಲಿಸಲು ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿದ ಪ್ರಯತ್ನ ಒಂದೆರಡಲ್ಲ. ವಾರ್ಡ್‌ಗಳ ಪುನರ್‌ವಿಂಗಡಣೆ ಸಂದರ್ಭದಲ್ಲಿ ಬಿಜೆಪಿ ಒಲವಿನ ಕ್ಷೇತ್ರವನ್ನು ಇವರ ವಾರ್ಡ್‌ಗೆ ಸೇರ್ಪಡೆ ಮಾಡಿತ್ತು. ಅವರ ವಾರ್ಡ್‌ಲ್ಲಿ ವಿವಿಧ ರೀತಿಯ ಭಾರಿ ಪ್ರಚಾರವನ್ನೂ ನಡೆಸಿತ್ತು. ಆದರೆ ಪ್ರಸನ್ನಕುಮಾರ್ ಮತ್ತೆ ಗೆದ್ದು ಬಂದಿದ್ದರು.
ಪ್ರಚಾರದ ಅಬ್ಬರವಿಲ್ಲ: ಕಾಂಗ್ರೆಸ್ ವರಿಷ್ಠರು ಶಿವಮೊಗ್ಗ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇ ಇಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ರೆಹಮಾನ್ ಖಾನ್ ಅವರು ಭದ್ರಾವತಿಗೆ ಬಂದು ವಾಪಸಾದರು. ಮೇ 1ರಂದು ನಡೆಯಬೇಕಿದ್ದ ರಾಹುಲ್ ಗಾಂಧಿ ಕಾರ್ಯಕ್ರಮ ರದ್ದಾಯಿತು. ಬಿ.ಕೆ. ಹರಿಪ್ರಸಾದ್ ಶಿವಮೊಗ್ಗಕ್ಕೆ ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ. ಇಷ್ಟೇ ಅಲ್ಲ, ನಗರಸಭೆಯ ಹಲವು ಕಾಂಗ್ರೆಸ್ ಸದಸ್ಯರೇ ಇವರ ಪರ ಪ್ರಚಾರಕ್ಕೆ ಬರಲಿಲ್ಲ. ಆದರೂ ಕೆ.ಬಿ. ಪ್ರಸನ್ನಕುಮಾರ್ ಅವರು ಗೆಲವಿಗೆ ಎಲ್ಲಾ ರೀತಿಯ ಪೂರಕ ಅಂಶಗಳನ್ನೇ ಹೊಂದಿದ್ದ ಉಪಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರನ್ನು ಸೋಲಿಸಿ ವಿಧಾನಸಭೆಯತ್ತ ನಡೆದಿದ್ದಾರೆ.
---

ಗೆಲವಿನಿಂದ ತುಂಬಾ ಸಂತೋಷ ಆಗಿದೆ. ಅವರಿಗೆ ಯಾವುದೇ ಜವಾಬ್ದಾರಿ ನಿಭಾಯಿಸುವ ಶಕ್ತಿ ಇದೆ. ಆದ್ದರಿಂದಲೇ ಜನಸೇವೆಯಲ್ಲಿ ನಿರಂತರ ತೊಡಗಲು ನನ್ನ ಸಂಪೂರ್ಣ ಸಹಕಾರ ಇದೆ. ಇನ್ನು ಮುಂದೆ ಅವರು ಮೊದಲಿನಷ್ಟು ಮನೆಯಲ್ಲಿ ಸಮಯ ಕಳೆಯಲು ಆಗುವುದಿಲ್ಲ ಎಂದು ನನಗೆ ಗೊತ್ತಿದೆ. ಸ್ವಲ್ಪ ದಿನ ಕಷ್ಟ ಆಗಬಹುದು. ನಂತರ ಅಭ್ಯಾಸ ಆಗುತ್ತೆ.
- ಗೀತಾಂಜಲಿ, ಪತ್ನಿ

- ಹೊನ್ನಾಳಿ ಚಂದ್ರಶೇಖರ್

No comments:

Post a Comment