Sunday, 12 May 2013

ಕಡೇ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್! - from vijayakarnataka - santhosh kachinakatte

ಸಂತೋಷ್ ಕಾಚಿನಕಟ್ಟೆ 

ಶಿವಮೊಗ್ಗ: ಫೋರ್, ಸಿಕ್ಸರ್‌ಗಳನ್ನು ಸಿಡಿಸಿ ಗೆಲುವಿನ ನಾಗಾಲೋಟದಲ್ಲಿದ್ದ ಆಟಗಾರ ನಿರ್ಣಾಯಕ ಘಟ್ಟದಲ್ಲಿ ಸುಸ್ತಾಗಿ ಬ್ಯಾಟ್ ಬೀಸಲಾಗದೆ ಸೋತು ನಿರಾಸೆ ಅನುಭವಿಸಿದ. ಇನ್ನೇನು ತಮ್ಮ ತಂಡ ಗದ್ದೇಬಿಟ್ಟಿತೆಂದು ಸಂಭ್ರಮ ಆಚರಿಸುತ್ತಿದ್ದ ಅಭಿಮಾನಿಗಳು ನಿರಾಸೆಯಿಂದ ಮನೆ ಕಡೆಗೆ ಭಾರವಾದ ಹೆಜ್ಜೆಗಳನ್ನಿಟ್ಟರು. 

ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಮತ್ತು ತೀರ್ಥಹಳ್ಳಿ ಕ್ಷೇತ್ರದ ಫಲಿತಾಂಶ ಟಿ 20 ಕ್ರಿಕೆಟ್ ಪಂದ್ಯದಂತೆ ರೋಚಕ ಅಂತ್ಯ ಕಂಡಿತು. ಐಪಿಎಲ್ ಟಿ 20 ಪಂದ್ಯಗಳಂತೆ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ ಈ ಎರಡೂ ಕ್ಷೇತ್ರಗಳ ಫಲಿತಾಂಶ ಕಡೇ 3 ಸುತ್ತಿನಲ್ಲಿ ಇದ್ದಕ್ಕಿದ್ದಂತೆ ತಿರುವು ಪಡೆದು ಅದಲು ಬದಲಾಯಿತು. ಚಂಚಲೆಯಾದ ವಿಜಯಲಕ್ಷ್ಮಿ ಆರಂಭದಿಂದ ಕಡೇ ಘಳಿಗೆವರೆಗೆ ಒಬ್ಬನ ಪರವಾಗಿದ್ದು ಅಂತಿಮವಾಗಿ ಮತ್ತೊಬ್ಬನಿಗೆ ಒಲಿದಳು. 

ಶಿವಮೊಗ್ಗದಲ್ಲಿ ಕೆಜೆಪಿಯ ರುದ್ರೇಗೌಡ ಮತ್ತು ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನಕುಮಾರ್ ನಡುವಿನ 17 ಓವರ್‌ಗಳ ಪಂದ್ಯದಲ್ಲಿ 12ನೇ ಸುತ್ತಿನವರೆಗೆ ಏಕಮುಖವಾಗಿ ಸಾಗಿತ್ತು. ರುದ್ರೇಗೌಡರು ಪ್ರಸನ್ನಕುಮಾರ್ ವಿರುದ್ಧ ಪ್ರತಿ ಓವರ್‌ನಲ್ಲೂ 2ರಿಂದ 4 ಸಾವಿರ ರನ್‌ಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, 13ನೇ ಓವರ್‌ನಲ್ಲಿ ಪಂದ್ಯ ಇದ್ದಕ್ಕಿದ್ದಂತೆ ತಿರುವು ಪಡೆದುಕೊಂಡಿತ್ತು. 3500 ರನ್‌ಗಳ ಹಿನ್ನಡೆಯಲ್ಲಿದ್ದ ಪ್ರಸನ್ನ ಅಂತರವನ್ನು 1464ರನ್‌ಗಳಿಗೆ ಇಳಿಸಿಕೊಂಡರು. 14ನೇ ಓವರ್‌ನಲ್ಲಿ ಅಂತರ ಇನ್ನೂ ಕಡಿಮೆಯಾಗಿ 314ಕ್ಕೆ ಇಳಿಯಿತು. ರುದ್ರೇಗೌಡರು ಗೆದ್ದೇಬಿಟ್ಟರೆಂದು ಪಟಾಕಿ ಸಿಡಿಸಿ ವಿಜಯೋತ್ಸವಕ್ಕೆ ಹೊರಟಿದ್ದ ಅಭಿಮಾನಿಗಳ ಎದೆಯಲ್ಲಿ ಕಲ್ಲು ಕುಟ್ಟಲಾರಂಭಿಸಿತು. ಇನ್ನೇನು ಮುಗಿಯಿತು ಎಂದು ತೀವ್ರ ನಿರಾಸೆಯಿಂದ ಕ್ರೀಡಾಂಗಣದಿಂದ ಹೊರಡಲು ಅನುವಾಗಿದ್ದ ಪ್ರಸನ್ನ ಅಭಿಮಾನಿಗಳು ಕುತೂಹಲದಿಂದ ನಿಂತುಕೊಂಡೇ ಸ್ಕೋರ್ ಬೋರ್ಡ್ ಕಡೆಗೆ ಗಮನ ಹರಿಸಿದರು. 

16ನೇ ಓವರ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ರುದ್ರೇಗೌಡರನ್ನು ಹಿಂದಿಕ್ಕಿದ ಪ್ರಸನ್ನ ಏಕಾಏಕಿ 1032 ರನ್‌ಗಳ ಮುನ್ನಡೆ ಗಳಿಸಿದರು. ಅಭಿಮಾನಿಗಳ ಸಂಭ್ರಮಕ್ಕಂತೂ ಪಾರವೇ ಇರಲಿಲ್ಲ. ಉಳಿದಿರುವುದು ಒಂದೇ ಸುತ್ತು. ಅದರಲ್ಲೂ ಪ್ರಸನ್ನ ಕೇವಲ 250 ಮತಗಳಿಂದ ಮುನ್ನಡೆ ಗಳಿಸಿದರು. ಆಗ ಅಂಪೈರ್(ಅಧಿಕಾರಿ)ಗಳು ಸೂಪರ್ ಓವರ್ (ಅಂಚೆ ಮತಗಳು) ಆಡಲೇಬೇಕೆಂದರು. ಅಷ್ಟರಲ್ಲಾಗಲೆ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿ ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಅಂಪೈರ್‌ಗಳು ಆಟವನ್ನು ಒಂದು ಗಂಟೆ ಕಾಲ ಮುಂದೂಡಿದರು. ವಿಶ್ರಾಂತಿ ಬಳಿಕ ಆರಂಭವಾದ ಸೂಪರ್ ಓವರ್‌ನಲ್ಲೂ ಭರ್ಜರಿಯಾಗಿ ಬ್ಯಾಟ್ ಬೀಸಿದ ಪ್ರಸನ್ನ ಒಟ್ಟಾರೆಯಾಗಿ 278ರನ್‌ಗಳಿಂದ ಪಂದ್ಯವನ್ನು ಗೆದ್ದೇಬಿಟ್ಟರು. 

ಕ್ರೀಡಾಂಗಣದೊಳಗೆ ಮತ್ತು ಹೊರಗೆ ಸಂಭ್ರಮ ಆಚರಿಸುತ್ತಿದ್ದ ರುದ್ರೇಗೌಡರ ಅಭಿಮಾನಿಗಳು ಒಂದು ಕ್ಷಣ ನಂಬಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟರು. ಸಿಡಿಸಲು ತಂದ ಪಟಾಕಿ ಬಾಕ್ಸ್‌ಗಳನ್ನು ನಿರಾಸೆಯಿಂದ ವಾಪಸು ಒಯ್ದರು. ಪರಿಸ್ಥಿತಿ ಅದಲು ಬದಲಾಗಿತ್ತು. ನಿರಾಸೆಯಲ್ಲಿದ್ದ ಅಭಿಮಾನಿಗಳು 'ಪ್ರಸನ್ನ'ವದನರಾಗಿ ಕುಣಿಯಲು ಆರಂಭಿಸಿ ಪಟಾಕಿ ತರಲು ಅಂಗಡಿಯತ್ತ ಓಡಿದರು. 

ಕಡೆಯಲ್ಲಿ ಜಯ ಜಯ: ಇದಕ್ಕೂ ಮುನ್ನ ಮುಕ್ತಾಯವಾದ ತೀರ್ಥಹಳ್ಳಿ ಪಂದ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆಜೆಪಿಯ ಆರ್.ಎಂ.ಮಂಜುನಾಥಗೌಡ ಮತ್ತು ಹಾಲಿ ಶಾಸಕ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ನಡುವಿನ ಪಂದ್ಯದಲ್ಲಿ ಮಂಜುನಾಥಗೌಡರು ಆಘಾತಕಾರಿ ಸೋಲನುಭವಿಸಿದರು.1ರಿಂದ 13ನೇ ಓವರ್‌ವರೆಗೂ 3ಸಾವಿರ ರನ್ ಲೀಡ್‌ನಲ್ಲಿದ್ದ ಮಂಜುನಾಥಗೌಡ 14ನೇ ಓವರ್‌ನಲ್ಲಿ 982 ರನ್‌ಗಳಿಂದ ಹಿನ್ನಡೆ ಅನುಭವಿಸಿದರು. 

ಅಚ್ಚರಿ ಎಂದರೆ ಮೊದಲ 4ಓವರ್‌ಗಳಲ್ಲಿ 3ನೇ ಸ್ಥಾನದಲ್ಲಿದ್ದ ಕಿಮ್ಮನೆ ಆನಂತರದಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರರನ್ನು ಹಿಂದಿಕ್ಕಿದ್ದಲ್ಲದೆ 14ನೇ ಓವರ್‌ನಲ್ಲಿ ಗೌಡರನ್ನೂ ಹಿಂದಿಕ್ಕಿದರು. 15ನೇ ಓವರ್‌ನಲ್ಲಿ 1169 ರನ್, 16ನೇ ಓವರ್‌ನಲ್ಲಿ 1682 ಮತ್ತು 17ನೇ ಓವರ್‌ನಲ್ಲಿ 1343 ರನ್ ಮುನ್ನಡೆ ಗಳಿಸಿ ಜಯಗಳಿಸಿದರು. 

ಪಂದ್ಯವನ್ನು ಉಳಿಸಿಕೊಂಡ ಕಿಮ್ಮನೆ ರತ್ನಾಕರ್ ಅವರಿಗೂ ನಂಬಲಾಗುತ್ತಿಲ್ಲ. ತೀರ್ಥಹಳ್ಳಿಯಲ್ಲಿ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಮಂಜುನಾಥಗೌಡರ ಅಭಿಮಾನಿಗಳಿಗೂ ಇದೇ ಪರಿಸ್ಥಿತಿಯಾಗಿತ್ತು. ಕ್ರೀಡಾಂಗಣದಲ್ಲಿ ಎಲ್ಲರಿಗಿಂತಲೂ ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿದ ತಾವು ಎಡವಿದ್ದೆಲ್ಲಿ ಎಂದು ಲೆಕ್ಕಾಚಾರ ಹಾಕತೊಡಗಿದರು. 
http://vijaykarnataka.indiatimes.com/articleshow/19958225.cms

No comments:

Post a Comment